ಅನರ್ಹರಿಗೆ ಅಗ್ನಿಪರೀಕ್ಷೆ; ಉಪಚುನಾವಣೆಯಲ್ಲಿ ರಾಜಕೀಯ ನಾಯಕರ ಆಟ ಬಲ್ಲೋರಾರು?

ಈಗ ನಡೆಯಲಿರುವ ಉಪಚುನಾವಣೆ ಮೂರು ಪಕ್ಷಗಳಿಗೂ ಪ್ರತಿಷ್ಠೆಯ ವಿಷಯ. ಅದರಲ್ಲೂ ಬಿಜೆಪಿಗೆ ಅಧಿಕಾರದ ಅಳಿವು ಉಳಿವಿನ ಪ್ರಶ್ನೆ. ಕಾಂಗ್ರೆಸ್‌ಗೆ ಸ್ಥಾನ ಉಳಿಸಿಕೊಳ್ಳುವ ಅನಿವಾರ್ಯತೆ. ಜೆಡಿಎಸ್ ‌ಗೆ ಸರ್ಕಾರ ಬೀಳಿಸಿದವರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಹಪಾಹಪಿಯಾಗಿದೆ. ಇದೆಲ್ಲದರ ನಡುವೆ ಅನರ್ಹ ಶಾಸಕರಿಗೆ ಅಗ್ನಿಪರೀಕ್ಷೆ ಎಂದರೆ ತಪ್ಪಾಗಲಾರದು.

ಆದರೆ ಇಲ್ಲಿ ರಾಜಕೀಯ ಪಕ್ಷಗಳು ಮತ್ತು ಮುಖಂಡರು ಏನೇ ಹೇಳಿದರೂ ಏನೇ ಮಾಡಿದರೂ ಕೊನೆಗೆ ಇವರ ಭವಿಷ್ಯವನ್ನು ಬರೆಯುವವರು ಮತದಾರರು ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಹೀಗಾಗಿ ಮತದಾರರ ಮುಂದೆ ಮೂರು ಪಕ್ಷಗಳ ನಾಯಕರು ದೊಂಬರಾಟ ಶುರು ಮಾಡಿದ್ದಾರೆ. ಇನ್ನು ಸರ್ಕಾರ ಕೆಡವಿ, ಅಧಿಕಾರದ ಬಯಕೆಯಿಂದ ಬಿಜೆಪಿಗೆ ದೌಡಾಯಿಸಿರುವ ಅನರ್ಹ ಶಾಸಕರು ಈಗ ಬಗೆ ಬಗೆಯ ಮಾತುಗಳನ್ನಾಡಿದರೂ ಅವರಿಗೆ ತಮ್ಮ ಕ್ಷೇತ್ರದ ಜನರ ಆಶಯಕ್ಕಿಂತ ಅಧಿಕಾರ ಲಾಲಸೆಯೇ ಮುಖ್ಯ ಎಂಬುದು ಇಲ್ಲಿ ತನಕ ನಡೆದ ರಾಜಕೀಯ ಬೆಳವಣಿಗೆಯಿಂದ ಸಾಬೀತಾಗಿದೆ. ಜನಕ್ಕೆ ರಾಜಕೀಯ ದೊಂಬರಾಟ ಸಾಕಾಗಿದೆ.

ಕಳೆದ ಕೆಲವು ತಿಂಗಳಿಂದ ರಾಜ್ಯದಲ್ಲಿ ನಡೆದ ದೊಂಬರಾಟವನ್ನು ನೋಡುತ್ತಾ ಬಂದ ಜನಕ್ಕೆ ಕೊನೆಗೆ ಯಾವುದಾದರೊಂದು ಪಕ್ಷ ಬಹುಮತ ಪಡೆದು ಅಧಿಕಾರಾವಧಿ ಮುಗಿಸಿದರೆ ಸಾಕಪ್ಪಾ ಎನ್ನುವಂತಾಗಿದೆ. ಸರ್ಕಾರ ಆಡಳಿತ ಮಾಡಿದ್ದಕ್ಕಿಂತ ಹೆಚ್ಚಾಗಿ ಗಟ್ಟಿಯಾಗಿ ಉಳಿಸಿಕೊಳ್ಳಲು ಮಾಡಿದ ಸರ್ಕಸ್ಸೇ ಹೆಚ್ಚು. ಇದನ್ನು ನೋಡಿ ಜನರು ಕೂಡ ಬೇಸತ್ತು ಹೋಗಿದ್ದಾರೆ. ಇದೀಗ ನಡೆಯುತ್ತಿರುವ ಉಪಚುನಾವಣೆ ರಾಜಕೀಯ ನಾಯಕರಿಗೆ ಸೋಲು ಗೆಲುವು ಮಾತ್ರವಲ್ಲದೆ, ದ್ವೇಷ, ಪ್ರತೀಕಾರ ತೀರಿಸಿಕೊಳ್ಳುವ ಮತ್ತು ತಮಗಾಗದವರನ್ನು ಬಗ್ಗುಬಡಿಯುವ ಮಹಾನ್ ಆಟವೂ ಆಗಿದೆ. ಇದಕ್ಕಾಗಿ ಸರ್ವ ರೀತಿಯಲ್ಲಿ ನಾಯಕರು ಸಜ್ಜಾಗುತ್ತಿದ್ದಾರೆ.

ಹಟಕ್ಕೆ ಬಿದ್ದಿರುವ ಸಿದ್ದರಾಮಯ್ಯ ಈಗಾಗಲೇ ಕಾಂಗ್ರೆಸ್ ನಾಯಕ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಚುನಾವಣಾ ಅಖಾಡಕ್ಕಿಳಿದಿದ್ದಾರೆ. ಮೇಲ್ನೋಟಕ್ಕೆ ಚುನಾವಣಾ ಕದನಕ್ಕೆ ತಾವೇ ಕಾಂಗ್ರೆಸ್ ಪಕ್ಷದ ಮುಂಚೂಣಿ ನಾಯಕರಾಗಿ ಬಹಿರಂಗ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರಾಜ್ಯದ ಮಟ್ಟಿಗೆ ಕಾಂಗ್ರೆಸ್ ಪಕ್ಷವನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಬೇಕೆಂಬ ಹಟಕ್ಕೆ ಬಿದ್ದಿರುವ ಅವರು, ಸದ್ಯ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಹೇಗೆ ಗೆಲ್ಲಿಸಬೇಕೆಂಬ ತಂತ್ರವನ್ನು ರೂಪಿಸುವ ಬದಲಿಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರ ವಿರುದ್ಧ ಹರಿಹಾಯುತ್ತಾ ಜನರಿಂದ ಚಪ್ಪಾಳೆಗಿಟ್ಟಿಸಿಕೊಳ್ಳುತ್ತಿದ್ದಾರೆ.

ಕಾಂಗ್ರೆಸ್ ನಾಯಕರಲ್ಲಿ ಅತೃಪ್ತಿಯ ಹೊಗೆ. ಉಪಚುನಾವಣೆಯಲ್ಲಿ ಹೇಗೆ ಗೆಲುವು ಸಾಧಿಸಬೇಕೆಂಬ ತಂತ್ರ ಮಾಜಿ ಡಿ.ಕೆ.ಶಿವಕುಮಾರ್ ಅವರಿಗೆ ಮಾತ್ರ ಚೆನ್ನಾಗಿ ಕರಗತವಾಗಿದೆ. ಈಗಿನ ಪರಿಸ್ಥಿತಿಯನ್ನು ನೋಡಿದರೆ ಅವರು ಇನ್ನೂ ಚುನಾವಣಾ ಅಖಾಡಕ್ಕಿಳಿದಂತೆ ಕಾಣುತ್ತಿಲ್ಲ. ಅವರ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿಯೇ ಉಪಚುನಾವಣೆಯನ್ನು ಕಾಂಗ್ರೆಸ್ ಎದುರಿಸುತ್ತಿದ್ದರೂ ಅವರಿಗೆ ಸಾಥ್ ಕೊಡುವಲ್ಲಿ ಅವರ ಪಕ್ಷದ ನಾಯಕರೇ ಹಿಂದೇಟು ಹಾಕುತ್ತಿರುವುದು ಈಗ ಕಂಡು ಬರುತ್ತಿದೆ. ಬಹುಶಃ ಮುಂದಿನ ದಿನಗಳಲ್ಲಿ ಸಾಥ್ ನೀಡಿದರೂ ನೀಡಬಹುದೇನೋ?

ಗೆಲ್ಲುವ ಉನ್ಮಾದದಲ್ಲಿ ಯಡಿಯೂರಪ್ಪ. ಬಿಜೆಪಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಅಧಿಕಾರದ ಕುರ್ಚಿಯನ್ನು ಉಳಿಸಿಕೊಳ್ಳಬೇಕಾದರೆ ಅನರ್ಹ ಶಾಸಕರ ಪೈಕಿ ಕನಿಷ್ಠ ಎಂಟು ಮಂದಿ ಗೆಲುವು ಸಾಧಿಸಲೇಬೇಕಾದ ಅನಿವಾರ್ಯತೆಯಿದೆ. ಆದರೆ ಯಡಿಯೂರಪ್ಪ ಮಾತ್ರ ಎಲ್ಲ ಸ್ಥಾನಗಳನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂಬ ಉನ್ಮಾದದಲ್ಲಿದ್ದಾರೆ. ಇಲ್ಲಿ ಅವರು ಎಷ್ಟರ ಮಟ್ಟಿಗೆ ಸಫಲರಾಗುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಅನರ್ಹರನ್ನು ಸೋಲಿಸುವುದೇ ಜೆಡಿಎಸ್ ಗುರಿ. ಇದೆಲ್ಲದರ ನಡುವೆ ಜೆಡಿಎಸ್ ಕೈಕಟ್ಟಿ ಕುಳಿತಿಲ್ಲ. ತಮ್ಮ ಪಕ್ಷದ ಮೂವರನ್ನು ಆಪರೇಷನ್ ಕಮಲದ ಮೂಲಕ ಸೆಳೆದಿದ್ದು ಮತ್ತು ಚೆನ್ನಾಗಿ ನಡೆದುಕೊಂಡು ಹೋಗುತ್ತಿದ್ದ ಸರ್ಕಾರವನ್ನು ಉರುಳಿಸಿ ತಮ್ಮ ಸಿಎಂ ಗಾದಿಗೆ ಸಂಚಕಾರ ತಂದ ಅನರ್ಹ ಶಾಸಕರ ಮೇಲೆ ದ್ವೇಷವಂತೂ ಇದ್ದೇ ಇದೆ. ಹೇಗಾದರೂ ಮಾಡಿ ಅನರ್ಹ ಶಾಸಕರನ್ನು ಸೋಲಿಸಲೇಬೇಕೆಂಬ ಹಟಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿದ್ದಿದ್ದಾರೆ. ಈಗಾಗಲೇ ಅದನ್ನು ಬಹಿರಂಗವಾಗಿ ಹೇಳಿದ್ದಾರೆ. ಉಪ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಅನರ್ಹ ಶಾಸಕರನ್ನು ಸೋಲಿಸಿ ಪ್ರತೀಕಾರ ತೀರಿಸಿಕೊಳ್ಳುವುದು ಅವರ ಗುರಿಯಾಗಿದೆ. ಇನ್ನು ಹೊಸಕೋಟೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ‌ಬಚ್ಚೇಗೌಡ ಅವರಿಗೆ ಬೆಂಬಲ ನೀಡುವ ಮೂಲಕ ಎಂಬಿಟಿ ನಾಗರಾಜ್ ಅವರನ್ನು ಸೋಲಿಸಲೇಬೇಕೆಂಬ ನಿರ್ಧಾರಕ್ಕೆ ಬಂದಿದ್ದಾರೆ. ಇಲ್ಲಿ ಶರತ್ ಬಚ್ಚೇಗೌಡ ಅವರ ತಂದೆ ಬಚ್ಚೇಗೌಡ ಅವರು ಕುಮಾರಸ್ವಾಮಿ ಅವರಿಗೆ ರಾಜಕೀಯ ಶತ್ರುವಾಗಿದ್ದು, ಮಗನಿಗೆ ಬೆಂಬಲ ನೀಡುವ ಮೂಲಕ ತಂದೆ ಬಿಜೆಪಿ ಸಂಸದ ಬಚ್ಚೇಗೌಡ ಅವರಿಗೆ ಟಾಂಗ್ ನೀಡಿದ್ದಾರೆ.

ದೇವೇಗೌಡರ ರಾಜಕೀಯ ಆಟ ಬಲ್ಲೋರಾರು? ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಜಿದ್ದಾಜಿದ್ದಿಯ ಆಟ ಆಡುತ್ತಿದ್ದು, ಅದು ಜನಕ್ಕೆ ಗೊತ್ತಾಗುತ್ತಿದೆಯಾದರೂ ಜೆಡಿಎಸ್ ತಂತ್ರ ಮಾತ್ರ ಗೌಪ್ಯವಾಗಿದೆ. ದೇವೇಗೌಡರು ರಾಜಕೀಯ ತಂತ್ರಗಾರಿಕೆಯಲ್ಲಿ ನಿಪುಣರಾಗಿದ್ದು, ಈ ಚುನಾವಣೆಯಿಂದ ಒಂದು ವೇಳೆ ಲಾಭವೂ ಆಗಬಹುದು, ಆಗದೆಯೂ ಇರಬಹುದು. ಆದರೆ ಪುತ್ರ ಕುಮಾರಸ್ವಾಮಿ ಸರ್ಕಾರಕ್ಕೆ ಕಂಟಕ ತಂದ ಅನರ್ಹ ಶಾಸಕರಿಗೆ ತಕ್ಕ ಶಾಸ್ತಿ ಮಾಡಲು ತಂತ್ರ ನಡೆಸಿಯೇ ನಡೆಸುತ್ತಾರೆ ಎಂಬುದನ್ನು ಮಾತ್ರ ತಳ್ಳಿಹಾಕುವಂತಿಲ್ಲ. 

Leave a Reply

Your email address will not be published. Required fields are marked *