ಅನರ್ಹರ ಕುರಿತು ಬಿಜೆಪಿಗೆ ಎಚ್ಚರಿಕೆ ನೀಡಿದ ಡಿ.ಕೆ.ಶಿವಕುಮಾರ್!!

ಅನರ್ಹ ಶಾಸಕರು ಬಿಜೆಪಿ ನಾಯಕರ ಚಡ್ಡಿ, ಪ್ಯಾಂಟು, ಜೇಜು ಎಲ್ಲಾ ಹರಿಯುತ್ತಾರೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ. ನಗರದಲ್ಲಿ ನಡೆದ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, ಕಡಿಮೆ ಮಾತನಾಡಿ ಅಂತ ನಮ್ಮ ಗುರುಗಳು ಹೇಳಿದ್ದಾರೆ. ಮೌನಕ್ಕೆ ಶರಣಾಗಬೇಕೆಂಬ ಆಸೆ ನನಗಿದೆ. ಆದರೆ ನನ್ನ ಸ್ನೇಹಿತರು, 17 ಜನ ಅನರ್ಹ ಶಾಸಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಗಿಫ್ಟ್ ನೀಡಿದ್ದಾರೆ. ಅವರು ನಮ್ಮನ್ನೇ ಬಿಟ್ಟಿಲ್ಲ, ಇನ್ನು ಬಿಜೆಪಿ ನಾಯಕರನ್ನ ಬಿಡುತ್ತಾರಾ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.

ನಾನು ತಪ್ಪು ಮಾಡಿಲ್ಲ. ನನಗೆ ಅಗ್ನಿ ಪರೀಕ್ಷೆ ಬಂದಾಗ ನನ್ನ ಜೊತೆ ನೀವು ಇದ್ರಿ. ರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ. ಯಾರು ಗೂಟ ಹೊಡೆದುಕೊಂಡು ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದರು. ನಾನು ಬಂಧನಕ್ಕೆ ಒಳಗಾಗುವ ಮುನ್ನ ನನ್ನ ತಂದೆಯ ಪೂಜೆಗೆ ಅವಕಾಶ ನೀಡಲಿಲ್ಲ. ಹೀಗಾಗಿ ಕಣ್ಣೀರು ಹಾಕಿದ್ದೆ. ಈ ವಿಚಾರವಾಗಿ ಅನೇಕರು ಸಾಕಷ್ಟು ಟೀಕೆ, ವ್ಯಾಖ್ಯಾನ ಮಾಡಿದರು. ಉಪ್ಪು ತಿಂದವನು ನೀರು ಕುಡಿಯಲೇಬೇಕು ಎಂದು ಹೇಳಿದ್ದರು. ಅವರಿಗೆ ಮುಂದಿನ ದಿನಗಳಲ್ಲಿ ನೀರು ಕುಡಿಸುತ್ತೇನೆ ಎಂದು ಗುಡುಗಿದರು.

ಉಪ ಚುನಾವಣೆಯಲ್ಲಿ ಪಕ್ಷದ ಪರ ಕೆಲಸ ಮಾಡುತ್ತೇನೆ. ಆದರೆ ಮೇಲಿಂದ ಮೇಲೆ ನೋಟಿಸ್‍ಗಳು ಬರುತ್ತಿವೆ. ಹೀಗಾಗಿ ಕೋರ್ಟು, ಕಚೇರಿಗೆ ಅಲೆದಾಡುತ್ತಿದ್ದೇನೆ. ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕ್ಷಾಂಕಿಯಲ್ಲ. ದಿನೇಶ್ ಗುಂಡೂರಾವ್ ಅಧ್ಯಕ್ಷರಾಗಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದಾರೆ. ನಾನು ಪಕ್ಷದ ಕೆಲಸವನ್ನು ಮಾಡಬೇಕಿದೆ. ನನ್ನ ರಕ್ಷಣೆಯನ್ನು ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಮಹದಾಯಿ ವಿಚಾರದಲ್ಲಿ ಬಿಜೆಪಿ ನಾಯಕರಿಗೆ ಒಂದು ನೋಟಿಫಿಕೇಷನ್ ಮಾಡಿಸಲು ಆಗಲಿಲ್ಲ. ಮತಗಳು ಎನ್ನುವುದು ಒಂದು ವ್ಯಾಪಾರವಾಗಿದೆ. ಮಹದಾಯಿ ವಿಚಾರದಲ್ಲಿ ಬಿಜೆಪಿಯವರಿಗೆ ನ್ಯಾಯ ಒದಗಿಸಿಕೊಡಲು ಆಗಲಿಲ್ಲ. ಹೀಗಾಗಿ ಅವರಿಗೆ ಮತದ ಮೂಲಕ ಉತ್ತರ ನೀಡಬೇಕು ಎಂದು ಕಿಡಿಕಾರಿದರು.

Leave a Reply

Your email address will not be published. Required fields are marked *