ಕಲಬುರ್ಗಿಯಿಂದ ಹಾರಿತು ಮೊದಲ ವಿಮಾನ! ನಾಲ್ಕು ದಶಕಗಳ ಕನಸಿಗೆ ಬಂತು ರೆಕ್ಕೆ!

ಕಲ್ಯಾಣ ಕರ್ನಾಟಕ ಜನರ ದಶಕಗಳ ಕನಸು ಇಂದು ನನಸಾಗಿದೆ. ರಾಜಧಾನಿ ಬೆಂಗಳೂರಿಗೆ ಹೋಗಲು ಹದಿಮೂರರಿಂದ ಹದಿನಾಲ್ಕು ತಾಸು ಜನ ಪ್ರಯಾಣಿಸಬೇಕಿತ್ತು, ಆದರೆ ಈಗ ಅದರಿಂದ ಮುಕ್ತಿ ಸಿಕ್ಕಂತಾಗಿದೆ. ಇಂದು ಸಿಎಂ ಯಡಿಯೂರಪ್ಪ ಕಲಬುರ್ಗಿ ವಿಮಾನ ನಿಲ್ದಾಣವನ್ನ ಲೋಕಾರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಬಿಎಸ್​ವೈ, ಕಲ್ಯಾಣ ಕರ್ನಾಟಕ ಶರಣರ ಭೂಮಿ. ಇಲ್ಲಿ ಅಭಿವೃದ್ಧಿಯ ಶಕೆ ಪ್ರಾರಂಭವಾಗಲಿ ಅಂತಾ 2008 ರಲ್ಲಿ ವಿಮಾನ ನಿಲ್ದಾಣ ಶಂಕು ಸ್ಥಾಪನೆ ಮಾಡಿದ್ದೆ. ಈಗ ಅಭಿವೃದ್ಧಿಯ ಹೊಸ ಅದ್ಯಾಯ ಪ್ರಾರಂಭವಾಗ್ತಿದೆ, ಕಲಬುರ್ಗಿ ವಿಮಾನ ನಿಲ್ದಾಣ ಉದ್ಘಾಟನೆ ಆಗಿದೆ. ಬೆಂಗಳೂರು ನಂತರ ಹೆಚ್ಚು ಉದ್ದವಾಗಿರುವ  ರನ್ ವೇ ಕಲಬುರ್ಗಿ ವಿಮಾನ ನಿಲ್ದಾಣ ಹೊಂದಿದೆ.

ಕಲಬುರ್ಗಿ ಜಿಲ್ಲೆಯ ಅಭಿವೃದ್ಧಿಗೆ ಏನು ಆಗಬೇಕು ಅದನ್ನ ಚಾಚು ತಪ್ಪದೆ ಮಾಡ್ತೇನೆ. ಕಲ್ಯಾಣ ಕರ್ನಾಟಕ ಮರುನಾಮಕರಣ ಮಾಡೋದರ ಮೂಲಕ ನಿಜಾಮನ ಕಹಿ ನೆನಪು ಮರೆಸುವಂತಾಗಿದೆ. ಬಜೆಟ್​ನಲ್ಲಿ ಕಲ್ಯಾಣ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ಮಿಸಲಿಡುತ್ತೇನೆ. ಈಗ ರೈತರಿಗಾಗಿ ಎರಡು ಸಾವಿರ ಮೊದಲ ಕಂತು ಬಿಡುಗಡೆ ಮಾಡಿದ್ದೇನೆ. ಡಿಸೆಂಬರ್​ನಲ್ಲಿ ಕಲ್ಯಾಣ ರೈತರಿಗೆ ಎರಡನೇ ಕಂತಿನಲ್ಲಿ ಎರಡು ಸಾವಿರ ರೂಪಾಯಿ ಬಿಡುಗಡೆ ಮಾಡ್ತೇನೆ ಎಂದು ತಿಳಿಸಿದರು.

ಸ್ಟಾರ್​ಏರ್ ಕಂಪನಿಯ ಮೊದಲ ವಿಮಾನದಲ್ಲಿ ಸಿಎಂ ಬೆಂಗಳೂರಿನಿಂದ ಆಗಮಿಸಿದರು. ಲೋಕಾರ್ಪಣೆ ಮಾಡಿ ಅದರಲ್ಲೇ ಬೆಂಗಳೂರಿಗೆ ವಾಪಸ್​ ತೆರಳಿದರು. ಇನ್ನು, ಕಲಬುರ್ಗಿ ವಿಮಾನ ನಿಲ್ದಾಣ 740 ಏಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಿದ್ದು 3,725 ಮೀ. ಉದ್ದ, 60 ಮೀ. ಅಗಲವಾದ ರನ್​ ವೇ ಹೊಂದಿದೆ. ಸುಮಾರು 200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ವಿಮಾನ ನಿಲ್ದಾಣದ ನಿರ್ಮಾಣ  ಕಾಮಗಾರಿ 2008ರಲ್ಲಿ ಪ್ರಾರಂಭವಾಗಿತ್ತು.

ಕಲಬುರ್ಗಿ ವಿಮಾನ ನಿಲ್ದಾಣ ರಾಜ್ಯದ 6ನೇ ನಾಗರಿಕ ವಿಮಾನ ನಿಲ್ದಾಣ. ಕಲ್ಯಾಣ ಕರ್ನಾಟಕ ಭಾಗದ ಮೊದಲ ನಾಗರಿಕ ವಿಮಾನ ನಿಲ್ದಾಣವಾಗಿದೆ.ರಾಜ್ಯದ 2ನೇ ಅತಿ ಉದ್ದದ ರನ್ ವೇ ಆಗಿದ್ದು 3.25 ಕಿ.ಮೀ ಉದ್ದವಿದೆ. ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಹೆಸರಿಡಲು ಈಗ ತಿಕ್ಕಾಟ ಶುರುವಾಗಿದೆ. ನೃಪತುಂಗ, ಸಂತಸೇವಾಲಾಲ್, ಶರಣಬಸವೇಶ್ವರ, ಅಂಬೇಡ್ಕರ್ ಹೆಸರು ಕೇಳಿಬರುತ್ತಿದೆ. ಸದ್ಯ ಬೆಂಗಳೂರು, ನವದೆಹಲಿ, ತಿರುಪತಿ, ಹಾಗೂ ಮುಂಬೈಗೆ ತೆರಳಲು, ವಿಮಾನಗಳ ಟಿಕೆಟ್​ಗೆ ಬೇಡಿಕೆ ಇದೆ.

Leave a Reply

Your email address will not be published. Required fields are marked *