‘ಮಹಾ’ ಸರ್ಕಸ್ ಅಂತ್ಯ; ಉದ್ಧವ್ ಠಾಕ್ರೆ ಮುಂದಿನ ಸಿಎಂ; ಒಂದಾದ ಶಿವಸೇನಾ-ಎನ್​ಸಿಪಿ-ಕಾಂಗ್ರೆಸ್; ಇಂದು ಅಧಿಕೃತ ಘೋಷಣೆ

ಹಲವು ದಿನಗಳ ಹೊಯ್ದಾಟಗಳ ಮಧ್ಯೆ ಮಹಾರಾಷ್ಟ್ರದಲ್ಲಿ ಕೊನೆಗೂ ಸರ್ಕಾರ ಅಸ್ತಿತ್ವಕ್ಕೆ ಬರುವುದು ನಿಶ್ಚಿತವಾಗಿದೆ. ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಶಿವಸೇನಾ-ಎನ್​​ಸಿಪಿ-ಕಾಂಗ್ರೆಸ್ ಪಕ್ಷಗಳು ಮಹಾ ಮೈತ್ರಿಕೂಟ ಸರ್ಕಾರ ರಚಿಸಲು ನಿರ್ಧರಿಸಿವೆ. ಇಂದು ಮೂರೂ ಪಕ್ಷಗಳ ಮುಖಂಡರು ಒಟ್ಟಾಗಿ ಪತ್ರಿಕಾಗೋಷ್ಠಿ ನಡೆಸಿ ಘೋಷಣೆ ಮಾಡಲಿವೆ. ನಿನ್ನೆ ಮೂರು ಪಕ್ಷಗಳ ಮುಖಂಡರು ಸಭೆ ನಡೆಸಿ ಚರ್ಚಿಸಿದ ಬಳಿಕ ಈ ತೀರ್ಮಾನಕ್ಕೆ ಬಂದಿದ್ದಾರೆ. ಉದ್ಧವ್ ಠಾಕ್ರೆಯನ್ನು ಸಿಎಂ ಮಾಡಲು ಎಲ್ಲರೂ ಒಪ್ಪಿದ್ಧಾರೆನ್ನಲಾಗಿದೆ.

ಸಿಎಂ ವಿಚಾರದಲ್ಲಿ ಯಾವುದೇ ಅಧಿಕಾರ ಹಂಚಿಕೆ ಇರುವುದಿಲ್ಲ. ಉದ್ಧವ್ ಠಾಕ್ರೆ ಅವರೇ ಪೂರ್ಣಾವಧಿಯವರೆಗೆ ಮುಖ್ಯಮಂತ್ರಿಯಾಗಲಿದ್ದಾರೆ. ಠಾಕ್ರೆ ಸಿಎಂ ಆಗಲು ಎನ್​ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಒಮ್ಮತದಿಂದ ಸಮ್ಮತಿ ವ್ಯಕ್ತಪಡಿಸಿವೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ ಬಳಿಕ ಮೂರೂ ಪಕ್ಷಗಳು ಮೂರು ಪಕ್ಷಗಳು ಒಗ್ಗೂಡಿ ಸರ್ಕಾರ ರಚನೆಗೆ ರಾಜ್ಯಪಾಲರಲ್ಲಿ ಹಕ್ಕು ಮಂಡನೆ ಮಾಡಲಿವೆ.

ನಿನ್ನೆ  ಬೆಳಗ್ಗೆಯಿಂದಲೂ ಎನ್​ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಸಾಕಷ್ಟು ಸಮಾಲೋಚನೆ ಮತ್ತು ಚರ್ಚೆಗಳನ್ನು ನಡೆಸಿವೆ. ತಮ್ಮೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಪೆಸೆಂಟ್ಸ್ ವರ್ಕರ್ಸ್ ಪಕ್ಷ, ಸಮಾಜವಾದಿ ಪಕ್ಷ, ಸ್ವಾಭಿಮಾನಿ ಪಕ್ಷ ಮತ್ತು ಸಿಪಿಐಎಂ ಪಕ್ಷಗಳೊಂದಿಗೆ ಎನ್​ಸಿಪಿ-ಕಾಂಗ್ರೆಸ್ ಮುಖಂಡರು ಚರ್ಚೆ ನಡೆಸಿದ್ದರು. ಬಿಜೆಪಿಯನ್ನು ಅಧಿಕಾರದಿಂದ ದೂರು ಇಡಲು ಶಿವಸೇನಾ ನೇತೃತ್ವದಲ್ಲಿ ಸರ್ಕಾರ ರಚನೆಗೆ ಈ ಸಣ್ಣ ಮಿತ್ರ ಪಕ್ಷಗಳು ಒಪ್ಪಿಗೆ ಸೂಚಿಸಿದವೆನ್ನಲಾಗಿದೆ.

ಮಿತ್ರ ಪಕ್ಷಗಳ ಒಪ್ಪಿಗೆ ಸಿಕ್ಕ ಬಳಿಕ ಸರ್ಕಾರದಲ್ಲಿ ಅಧಿಕಾರ ಹಂಚಿಕೆ ಕುರಿತಾಗಿ ಶಿವಸೇನಾ ಜೊತೆ ಎನ್​ಸಿಪಿ ಮತ್ತು ಕಾಂಗ್ರೆಸ್ ನಾಯಕರು ಸಮಾಲೋಚನೆ ನಡೆಸಿದರು. ಮೈತ್ರಿ ಸರ್ಕಾರಕ್ಕೆ ಭವಿಷ್ಯದಲ್ಲಿ ತೊಡರುಗಳು ಎದುರಾಗಬಾರದೆಂದು ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರಚಿಸಿ ಅದರಂತೆ ಆಡಳಿತ ನಡೆಸಲು ನಿರ್ಧರಿಸಲಾಗಿದೆ. ಈ ಸಂದರ್ಭದಲ್ಲಿ ಸಿಎಂ ಸ್ಥಾನಕ್ಕೆ ಶಿವಸೇನೆಯ ಏಕನಾಥ್ ಶಿಂಧೆ, ಸಂಜಯ್ ರಾವತ್ ಮತ್ತು ಅರವಿಂದ್ ಸಾವಂತ್ ಅವರ ಹೆಸರುಗಳು ಚಾಲನೆಗೆ ಬಂದವು. ಆದರೆ, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆಯವರೇ ಮುಖ್ಯಮಂತ್ರಿಯಾಗಲಿ ಎಂದು ಎನ್​ಸಿಪಿ ಮತ್ತು ಕಾಂಗ್ರೆಸ್ ನಾಯಕರು ಒತ್ತಾಯಿಸಿದರು. 50-50 ಸೂತ್ರದಲ್ಲಿ ಸಿಎಂ ಸ್ಥಾನದ ಹಂಚಿಕೆಯಾಗಲಿ ಎಂಬ ಅಭಿಪ್ರಾಯಗಳೂ ವ್ಯಕ್ತವಾದವು. ಆದರೆ, ಸಿಎಂ ಹುದ್ದೆಗಿಂತ ಹೆಚ್ಚಾಗಿ 5 ವರ್ಷ ಆಡಳಿತ ನಡೆಸುವುದು ಮುಖ್ಯ ಎಂಬ ತೀರ್ಮಾನಕ್ಕೆ ಬರಲಾಗಿದೆ.

ಮಗ ಆದಿತ್ಯ ಠಾಕ್ರೆಯನ್ನು ಸಿಎಂ ಮಾಡುವ ಮನಸಲ್ಲಿದ್ದ ಉದ್ಧವ್ ಠಾಕ್ರೆ ಈಗ ಸಿಎಂ ಆಗಲು ಒಪ್ಪಿಕೊಂಡಿದ್ಧಾರೆ. ಸೇನಾ ಕುಟುಂಬದಿಂದ ಮೊದಲ ಬಾರಿ ಚುನಾವಣಾ ಕಣಕ್ಕೆ ಧುಮುಕಿ ಜಯಿಸಿದ್ದ ಆದಿತ್ಯ ಠಾಕ್ರೆ ಅವರನ್ನು ಶಿಕ್ಷಣ ಸಚಿವರನ್ನಾಗಿ ಮಾಡುವ ಸಾಧ್ಯತೆ ಇದೆ.

ಅಕ್ಟೋಬರ್ 21ರಂದು ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆದಿತ್ತು. ಬಿಜೆಪಿ-ಶಿವಸೇನಾ ಹಾಗೂ ಇತರ ಕೆಲ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದವು. 288 ಸದಸ್ಯಬಲದ ವಿಧಾನಸಭೆಯಲ್ಲಿ ಬಿಜೆಪಿ 105 ಸ್ಥಾನಗಳನ್ನು ಗಳಿಸಿ ನಂಬರ್ ಒನ್ ಪಕ್ಷ ಎನಿಸಿತ್ತು. ಶಿವಸೇನಾ 56, ಎನ್​ಸಿಪಿ 54 ಮತ್ತು ಕಾಂಗ್ರೆಸ್ ಪಕ್ಷ 44 ಸ್ಥಾನಗಳನ್ನು ಗೆದ್ದವು. ಬಿಜೆಪಿ ಮತ್ತು ಶಿವಸೇನಾ ಜೊತೆಗೂಡಿ ಸರ್ಕಾರ ರಚಿಸುವ ನಿರೀಕ್ಷೆ ಇತ್ತಾದರೂ ಸಿಎಂ ಸ್ಥಾನದ ವಿಚಾರವಾಗಿ ಭಿನ್ನಾಭಿಪ್ರಾಯವುಂಟಾಗಿ ಶಿವಸೇನಾ ತನ್ನ ಎದುರಾಳಿಗಳತ್ತ ಮುಖ ಮಾಡಿತು.

ಎನ್​ಸಿಪಿ ಮತ್ತು ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ರಚಿಸಲು ಶಿವಸೇನಾ ನಿರ್ಧರಿಸಿತು. ರಾಜ್ಯಪಾಲರು ಕೊಟ್ಟ ಅವಧಿಯಲ್ಲಿ ಸರ್ಕಾರ ರಚಿಸಲು ಹಕ್ಕು ಮಂಡನೆ ಮಾಡಲು ಮೂರು ಅತಿದೊಡ್ಡ ಪಕ್ಷಗಳು ವಿಫಲವಾದ ಬೆನ್ನಲ್ಲೇ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನ ಹಾಕಲಾಯಿತು. ಮೊದಮೊದಲು ಶಿವಸೇನಾ ಜೊತೆ ಸರ್ಕಾರ ರಚಿಸಲು ಹಿಂದೇಟು ಹಾಕಿದ್ದ ಕಾಂಗ್ರೆಸ್ ಈಗ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಠಾಕ್ರೆ ಸಂಸ್ಥಾಪನೆಯ ಪಕ್ಷದೊಂದಿಗೆ ಅಧಿಕಾರ ಹಂಚಿಕೊಳ್ಳಲು ಮನಸ್ಸು ಮಾಡಿದೆ.

Leave a Reply

Your email address will not be published. Required fields are marked *