ಉಪಚುನಾವಣೆಯಲ್ಲಿ ಜೆಡಿಎಸ್ ಒಂದೇ ಒಂದು ಸ್ಥಾನವನ್ನೂ ಗೆಲ್ಲುವುದಿಲ್ಲ : ಸಿಎಂ ಭವಿಷ್ಯ

ಉಪಚುನಾವಣೆಯಲ್ಲಿ 15 ಕ್ಷೇತ್ರಗಳ ಪೈಕಿ ಜೆಡಿಎಸ್ ಒಂದೇ ಒಂದು ಸ್ಥಾನವನ್ನೂ ಗೆಲ್ಲುವುದಿಲ್ಲ. ಮುಂದಿನ ಅವಧಿಗೂ ಬಿಜೆಪಿ ಅಧಿಕಾರದಲ್ಲಿರುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಉಪಚುನಾವಣೆ ನಂತರ ನಮ್ಮ ಸರ್ಕಾರ ಪತನವಾಗುತ್ತದೆ ಎಂದು ಹೇಳುತ್ತಿದ್ದಾರೆ. ಮೊದಲು ನೀವು ಎಷ್ಟು ಸ್ಥಾನ ಗೆಲ್ಲುತ್ತೀರಿ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯನವರ ಯೋಗ್ಯತೆಗೆ ಎಂಪಿ ಚುನಾವಣೆಯಲ್ಲಿ ಒಂದೇ ಸೀಟ್ ಬಂದಿದೆ. ಜನ ಇವತ್ತು ಬಿಜೆಪಿ, ಮೋದಿ ಜೊತೆ ಇದ್ದಾರೆ ಅನ್ನೋದನ್ನು ಕಾಂಗ್ರೆಸ್-ಜೆಡಿಎಸ್ ಮರೆಯಬಾರದು ಎಂದರು. ಲೋಕಸಭೆಯಲ್ಲೇ ಜನ ಅವರಿಗೆ ಏನು ಅಂತ ಹೇಳಿದ್ದಾರೆ. ಲೋಕಸಭೆಯಲ್ಲಿ ಜೆಡಿಎಸ್‍ನವರು ಒಂದೇ ಸ್ಥಾನ ಪಡೆದಿದ್ದಾರೆ. ಈ ಚುನಾವಣೆಯಲ್ಲಿ ಅವರಿಗೆ ಒಂದೂ ಸ್ಥಾನ ಬರೋದಿಲ್ಲ ಎಂದು ಸಿಎಂ ಭವಿಷ್ಯ ನುಡಿದರು.

ಯಾವುದೇ ಕಾರಣಕ್ಕೂ ಸರ್ಕಾರ ಅಸ್ಥಿರವಾಗುವುದಿಲ್ಲ. ಪ್ರತಿಪಕ್ಷಗಳು ಹಗಲುಗನಸು ಕಾಣುವುದನ್ನು ನಿಲ್ಲಿಸಲ್ಲಿ. ಮುಂದಿನ ಮೂರವರೆ ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ ಯಾರಿಗೂ ಅನುಮಾನ ಬೇಡ ಎಂದು ಪುನರುಚ್ಚಿಸಿದರು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಮತದಾರರು ಕೇವಲ ಒಂದೊಂದು ಸ್ಥಾನ ನೀಡಿದ್ದರು. ಈ ಉಪಚುನಾವಣೆಯಲ್ಲಿ 15ಕ್ಕೆ 15 ಕ್ಷೇತ್ರಗಳನ್ನು ನಾವು ಗೆಲ್ಲಲಿದ್ದೇವೆ. ಎರಡೂ ಪಕ್ಷಗಳು ಒಂದೇ ಒಂದು ಸ್ಥಾನವನ್ನು ಗೆಲ್ಲುವುದಿಲ್ಲ. ಬೇಕಿದ್ದರೆ ಇದನ್ನು ಬರೆದಿಟ್ಟುಕೊಳ್ಳಿ ಎಂದು ಸವಾಲು ಹಾಕಿದರು.

ಅಥಣಿ ಮತ್ತು ಕಾಗವಾಡದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆಗಾರಿಕೆಯನ್ನು ಹೊತ್ತುಕೊಂಡಿದ್ದಾರೆ. ಅವರು ಮುಂದಿನ ದಿನಗಳಲ್ಲೂ ಮಂತ್ರಿಯಾಗಿ ಮುಂದುವರೆಯುತ್ತಾರೆ. ರಾಷ್ಟ್ರೀಯ ಅಧ್ಯಕ್ಷರೇ ಇದನ್ನು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.

ಇದಕ್ಕೂ ಮುನ್ನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಬಿಎಸ್‍ವೈ, ಶಿವಸೇನೆ ಅಧಿಕಾರಕ್ಕಾಗಿ ಹೊಡೆದಾಟ ನಡೆಸಿದ ಪರಿಣಾಮ ಬಿಜೆಪಿಯು ಎನ್‍ಸಿಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಬೇರೆ ಯಾವುದೇ ಪಕ್ಷಕ್ಕೂ ಭವಿಷ್ಯ ಇಲ್ಲ ಅನ್ನೋದು ಎಲ್ಲ ಪಕ್ಷಗಳ ಮುಖಂಡರಿಗೆ ಮನವರಿಕೆ ಆಗಿದೆ. ಇದರಿಂದಾಗಿ ಬಿಜೆಪಿ-ಎನ್‍ಸಿಪಿ ಮೈತ್ರಿ ಸರ್ಕಾರ ರಚನೆಯಾಗಿದೆ ಎಂದರು.

Leave a Reply

Your email address will not be published. Required fields are marked *